ಮಂಗಳವಾರ, ಸೆಪ್ಟೆಂಬರ್ 6, 2016

ಕಾಡಿನಲ್ಲಿ ಮೂಡದ ಭಯ ನಾಡಿನಲ್ಲೇಕೆ?

ಮೈಸೂರಿನ ಒಂದು ಕಾಲೇಜಿನಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಜಾಥಾ ಮುಗಿಸಿ ದೊಡ್ಡದಾದ ಕೋಣೆಯೊಂದರಲ್ಲಿ ವೈದ್ಯನುದುರಿಸುವ ನಾಲ್ಕು ಮಾಹಿತಿ ತುಂಬಿದ ಮಾತುಗಳನ್ನು ಆಲಿಸುತ್ತಿದ್ದಾಗ ಪೆಚ್ಚುಮೋರೆ ಹಾಕಿಕೊಂಡು ಜರ್ಮನಿಯ ಹದಿಹರಯದ ಟಿಮ್ ಒಳಗೆ ಬಂದು ಖಾಲಿ ಇದ್ದ ಒಂದು ಕುರ್ಚಿಯನ್ನು ಎಳೆದು ಕುಳಿತ. ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಿರತನಾಗಿದ್ದ ನನಗೆ ತಕ್ಷಣ ಅವನನ್ನು ವಿಚಾರಿಸಿಕೊಳ್ಳಲಾಗಲಿಲ್ಲ. ಬಿಸಿಲಿನಲ್ಲಿ ನಡೆದು ದಣಿವಾಗಿರಬಹುದೆಂದು ಎಣಿಸಿದ್ದೆ. ಕಾರ್ಯಕ್ರಮ ಸುಲಲಿತವಾಗಿ ಮುಂದುವರಿದಿದ್ದರಿಂದ,
ಸ್ವಲ್ಪ ವಿಚಲಿತನಾದಂತೆ ಕಂಡ ಟಿಮ್‍ನನ್ನು ಪಕ್ಕಕ್ಕೆ ಕರೆದು ವಿಚಾರಿಸಿದೆ. ಸಿಟಿ ಬಸ್ ನಿಲ್ದಾಣದಲ್ಲಿ ಕಿಕ್ಕಿರಿದ ಗುಂಪಿನ ಜೊತೆಯಲ್ಲೇ ಬಸ್ಸನ್ನು ಏರುತ್ತಿದ್ದಾಗ ಖದೀಮರು ಕ್ರೆಡಿಟ್ ಕಾರ್ಡ್, ವಿಮೆಯ ಕಾರ್ಡ್ ಮತ್ತು 205 ಯೂರೋ ಇದ್ದ ಅವನ ಕೈಚೀಲವನ್ನು ಎಗರಿಸಿದ್ದರು. ಭಾರತಕ್ಕೆ ಬಂದ ಎರಡನೆ ವಾರವೇ ಘಟಿಸಿದ ಈ ಕಹಿ ಅನುಭವದಿಂದ ಅವನ ಮುಖ ಮಂಡಲ ತುಸು ನಿಸ್ತೇಜವಾಗಿತ್ತು. ತಮಾಷೆ ಮಾಡಿ ನಡೆದ್ದದ್ದೂ ಏನೂ ಇಲ್ಲ. ಮಾನವ ಜಗತ್ತಿನಲ್ಲಿ ಇವೆಲ್ಲಾ ಸರ್ವೇಸಾಮಾನ್ಯವೆಂದು ಅವನಿಗೆ ಸಮಾಧಾನ ಹೇಳಿ, ತುರ್ತಾಗಿ ಮಾಡಬೇಕಾದ ಕೆಲಸಗಳನ್ನು ಮನವರಿಕೆ ಮಾಡಿಕೊಟ್ಟೆ. ಜರ್ಮನಿಯಲ್ಲಿರುವ ಅವನ ತಾಯಿಗೆ ಕರೆಮಾಡಿ, ಅವನ ಕಾರ್ಡ್‍ಗಳನ್ನು ಬಳಸಿ ದುರುಪಯೋಗ ಪಡಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಮುಚ್ಚಿಸಲಾಯಿತು. ಅವನ ಕೂಡಿ ಬಿರುಬಿರನೆ ಆರಕ್ಷಕ ಠಾಣೆಗೆ ಹೋದರೆ, ನಮ್ಮ ಅಹವಾಲು ಸ್ವೀಕರಿಸುವ ವ್ಯವದಾನವಿರಲಿಲ್ಲ. ಬದಲಿಗೆ ಅಸಂಬದ್ಧ ಪಶ್ನೆಗಳನ್ನು ಕೇಳಿ ನಮ್ಮನ್ನೇ ಸುಸ್ತೊಡಿಸಿದರು. ಆನ್‍ಲೈನ್ ದೂರು ಕೊಡಿ ಎಂದರು. ವಾಪಸ್ಸು ಬಂದು ಆನ್‍ಲೈನ್ ದೂರು ಕೊಡಲು ಹೋದರೆ, ಅವರ ವೆಬ್‍ಸೈಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನನ್ನ ಕಿಸೆಯಿಂದ ಅವನ ಮೊಬೈಲ್‍ಗೆ ಮತ್ತು ಅವನ ಜೇಬಿಗೆ ಒಂದಷ್ಟು ರೊಕ್ಕ ಇಳಿಸಿ ಔದಾರ್ಯ ಮೆರೆದು ಮನೆಗೆ ಬಂದೆ. ಮನಸ್ಸು ಭಾರವಾದಂತಾಗಿ ಒಂದು ವಾರ ಹಿಮ್ಮುಖವಾಯಿತು.

ತಮ್ಮ ರೋಷನ್‍ನ ಮದುವೆಯ ಸಡಗರ ಮುಗಿದು, ಬೀಗರಿಗೆ ನಮ್ಮ ಮನೆಯಲ್ಲಿ ಔತಣ ಕೂಟ ಏರ್ಪಟ್ಟಿತ್ತು. ಅದ್ಯಾವ ಜಂಜಾಟಕ್ಕೂ ಸಿಲುಕದೇ ಖಾದಿ ಜುಬ್ಬಾ ಧರಿಸಿ ಸ್ಮಯಾಳನ್ನು ತೊಡೆಯ ಮೇಲೆ ಕುಳಿಸಿಕೊಂಡು ಆಟವಾಡುತ್ತಿದ್ದೆ. ಊಟದ ನಂತರ ನಾನು ಮತ್ತು ನನ್ನ ತಮ್ಮ ಸಾಗರ್ (ದೊಡ್ಡಪ್ಪನ ಮಗ) ಮಾತನಾಡಲು ಕುಳಿತೆವು. ಇರುವ ನೌಕರಿಯನ್ನು ಬಿಟ್ಟು, ಓದು ಮುಂದುವರಿಸುವ ಸಲುವಾಗಿ ಮರುದಿನವೇ ‘ಅವಕಾಶಗಳು ತುಂಬಿದ ದೇಶ’ ಎಂದು ಕರೆಯಲ್ಪಡುವ ಅಮೇರಿಕಾಗೆ ಪ್ರಯಾಣ ಬೆಳೆಸಲು ಅವನು ಸಜ್ಜಾಗಿದ್ದರೂ, ಕೊನೆ ಕ್ಷಣಗಳ ಧರ್ಮ ಸಂಕಟದಲ್ಲಿ ತೇಲುತ್ತಿದ್ದ. ಅವನ ಧರ್ಮ ಸಂಕಟದಲ್ಲಿ ಭಾಗಿಗಳಾಗಿ ಹಿತೈಷಿಗಳ ಹಿಂಡು ಅವನನ್ನು
ವಿಮಾನ ನಿಲ್ದಾಣದಲ್ಲಿ ಬಿಟ್ಟು, ಕಣ್ಣುಗಳಿಂದ ನಾಲ್ಕು ಹನಿಗಳ ಚೆಲ್ಲಿ ಆ ಪ್ರಯಾಣದ ಅವಶ್ಯಕತೆ ಬಗ್ಗೆ ಅವನಿಗೇ ಜಿಘ್ನಾಸೆ ಮೂಡುವಂತೆ ಮಾಡುವುದು ವಾಡಿಕೆ. ಅದರಂತೆಯೇ ನಾನೂ ವಿಮಾನ ನಿಲ್ದಾಣಕ್ಕೆ ಬರುತ್ತೇನೆಂದು ತಿಳಿಸಿದೆ. ನನ್ನ ಅದೃಷ್ಟಕ್ಕೆ ಹಾಗೇ ಹೇಳಿದ ಕೆಲ ಕ್ಷಣಗಳಲ್ಲೇ ನನ್ನ ಸ್ನೇಹಿತ ಪ್ರದೀಪ ಕರೆ ಮಾಡಿ, ಹೊರಗಡೆ ಎಲ್ಲಾದರೂ ಲಾಂಗ್ ಡ್ರೈವ್ ಹೋಗೋಣ ಬಾ ಎಂದು ಹೇಳಿ ನನ್ನನ್ನು ಸಂಕಷ್ಟಕ್ಕೆ ಸಿಲುಕಿಸಿದ. ಬರುತ್ತೇನೆಂದು ಹೇಳಿ ವಿಮಾನ ನಿಲ್ದಾಣಕ್ಕೆ ಹೋಗದೇ ಹೋದರೆ ಎಲ್ಲಿ ಸಾಗರ್‍ಗೆ ಬೇಸರವಾಗುತ್ತದೋ ಎಂಬ ಭಯ ಒಂದು ಕಡೆಯಾದರೆ ಪ್ರದೀಪ ಕೂಡ ಜಪಾನ್‍ಗೆ ಹೊರಡಲು ಸಿದ್ಧನಾಗಿದ್ದರಿಂದ ಅವನ ಬೇಡಿಕೆಯನ್ನೂ ಕೂಡ ತಿರಸ್ಕರಿಸುವಂತಿಲ್ಲ. ‘ಸ್ವಲ್ಪ ಟೈಮ್ ಕೊಡು ಮಾರಾಯ, ಯೋಚಿಸಿ ಹೇಳ್ತೀನಿ’ ಎಂದು ಹೇಳಿದರೆ ‘ಯೋಚಿಸುವುದಕ್ಕೆ ಏನಿದೆ. ಮೈಸೂರಿನಲ್ಲಿದ್ದು ನೀನು ಕಡೆದು ಕಟ್ಟಾಕುವುದು ಅಷ್ಟರಲ್ಲೇ ಇದೆ. ಸುಮ್ನೆ ಬಾ ಮಾರಾಯ. ಸಾಗರ ಕಡೆ ಸುತ್ತಾಡಿ ಬರುವ’ ಎಂದು ಕುಹಕವಾಡಿದ. ಬಿಡುವೆಂದರೆ ಏನೆಂದು ತಿಳಿಯದಷ್ಟು ಬಿಡುವಿದ್ದರಿಂದ, ಕುಳಿತು ಯೋಚಿಸಿದೆ. ಎಂತಹ ಕಾಕತಾಳೀಯ. ಮರುದಿನ ವಿಮಾನ ನಿಲ್ದಾಣ ಹೋಗಬೇಕಾದದ್ದು ಕೂಡ ಸಾಗರ್‍ನ ಕಳುಹಿಸಿಕೊಡುವುದಕ್ಕೆ. ಇವನೂ ಕೂಡ ಸಾಗರಕ್ಕೆ ಕರೆಯುತ್ತಿದ್ದಾನೆ. ಎರಡು ಸಾಗರರಲ್ಲಿ ಯಾವುದಕ್ಕೆ ಹೋಗುವುದು? ಅಳೆದು ತೂಗಿ ಸಾಗರದ ಜೊತೆ ಶಿರಸಿಯನ್ನು ಜೋಡಿಸಿಕೊಂಡು ಪ್ರದೀಪನ ಜೊತೆ ಹೊರಟೇ ಬಿಟ್ಟೆ.

ಅರಸೀಕೆರೆ-ಶಿವಮೊಗ್ಗ ಮೂಲಕ ಹೆಗ್ಗೋಡು ತಲುಪಿ ನಿನಾಸಂ ರಂಗ ಶಾಲೆಯನ್ನು ನೋಡಿ, ಪಕ್ಕದಲ್ಲೇ ಸಿಕ್ಕ ರಂಗಕರ್ಮಿ ಪ್ರಸನ್ನರವರ ಚರಕ ಉದ್ಯಮವನ್ನು ವೀಕ್ಷಿಸಿದ ನಂತರ ಪ್ರದೀಪನ ಇಚ್ಛೆಯಂತೆ ದೋಣಿಯನ್ನೇರಿ ಸಿಗಂದೂರು ಸುತ್ತಿ ಸಾಗರದ ಮೂಲಕ ಜೋಗ ತಲುಪಿದಾಗ ರಾತ್ರಿ 10 ಆಗಿತ್ತು. ಶ್ರೀರಂಗ ರೆಸಿಡೆನ್ಸಿಯಲ್ಲಿ ರಾತ್ರಿ ತಂಗಿ, ಬೆಳಗ್ಗೆ ಜೋಗದ ಪಾತಾಳವನ್ನು ಇಳಿದು ಅತ್ತಿ ಎಲ್ಲಾ ಕೋನಗಳಿಂದಲೂ ಜಲಪಾತದ ರಮಣೀಯ ಮನೋಹರ ದೃಶ್ಯವನ್ನು ಕಣ್ಣು ತುಂಬಿಕೊಳ್ಳುವಷ್ಟರಲ್ಲಿ ಕಾಲುಗಳು ಬಿದ್ದು ಹೋಗಿದ್ದವು. ಜೋಗದಲ್ಲೇ ಮಧ್ಯಾಹ್ನದ ಊಟ ಮುಗಿಸಿ ಮುನ್ನಡೆದು, ದಾರಿಯಲ್ಲಿ ಸಿಕ್ಕ ಕುರುಚಲು ಕಾಡಿನೊಳಗೆ ನವಿಲ ಹಿಂದೆ ಓಡಿ ನಾವೂ ಕೂಡ ಸಾಹಸಿಗಳೆಂದು ತೃಪ್ತಿ ಪಟ್ಟೆವು. ಚಂದ್ರಗುತ್ತಿ ನೋಡಿ, ಶಿರಸಿ ತಲುಪಿ ಮಾರಿಕಾಂಬ ದೇವಸ್ಥಾನದಲ್ಲಿ
ಸಂಗೀತ ಕಚೇರಿ ನೋಡುವ ನೆಪದಲ್ಲಿ ಸೀರೆಯುಟ್ಟ ಲಲನೆಯರನ್ನು ನೋಡಿದಾಗ ಮರುಭೂಮಿಯಾಗಿ ಕಾಣುತ್ತಿದ್ದ ಜಗತ್ತಿನಲ್ಲಿ ಪಕ್ಕನೆ ಮರುವನ ಗೋಚರಿಸಿದಂತಾಯಿತು. ‘ಕಾಣದ ಕಡಲಿಗೆ’ ಗೆಳೆಯರಾದ ಲಕ್ಷ್ಮಿನಾರಾಯಣ ಹೆಗ್ಗಡೆಯವರ ಮನೆಯಲ್ಲಿ ಹೊಟ್ಟೆ ತುಂಬಾ ಉಂಡು ಹೋಟಲಿನಲ್ಲಿ ಬಿದ್ದುಕೊಂಡೆವು. ಮರುದಿನ ಬನವಾಸಿ ನೋಡುವುದೋ ಅಥವಾ ನನ್ನ ಸ್ನೇಹಿತ ಅನಂತ ಜೋಷಿಯ ಮನೆ ಹೊಕ್ಕು ಕಾಲ ಕಳೆಯುವುದೋ ಎಂಬ ಗೊಂದಲ. 

ಮುಂಗೋಪಿಯಾದ ಪ್ರದೀಪನನ್ನು ಒಲಿಸಿ ಹುಬ್ಬಳ್ಳಿ ರಸ್ತೆಯಲ್ಲಿ ತೆರಳಿ ಇಸಲೂರುನಲ್ಲಿ ಎಡಕ್ಕೆ ಹೆಮ್ಮಾಡಿ ಮಾವಿನಕಟ್ಟೆ ಕಡೆಗೆ ತಿರುಗಿ ಮಾವಿನಸರದಲ್ಲಿರುವ ಜೋಷಿಯ ಮನೆ ತಲುಪಿದಾಗ ನಮ್ಮಿಬ್ಬರ ಹೊಟ್ಟೆ ಚುರುಗುಟ್ಟುತ್ತಿತ್ತು. ಕೈಕಾಲು ಮುಖ ತೊಳೆದು ಇಬ್ಬರೂ ಅವರ ಅಡುಗೆ ಕೋಣೆಯಲ್ಲೇ ಆಸೀನರಾದೆವು. ಜೋಷಿಯ ಅಮ್ಮ ಸಾವಾದಾನವಾಗಿ ಅಕ್ಕಿ ದೋಸೆ, ಹಲಸಿನ
ದೋಸೆಯನ್ನು ಮಗಚಿದ್ದೇ ಮಗಚಿದ್ದು. ದೋಸೆಯ ಜೊತೆ ಕಾಯಿ ಚಟ್ನಿ, ಬೆಲ್ಲ, ತುಪ್ಪ, ಹಲಸಿನ ಜಾಮ್ ಕೊಟ್ಟರೆ ಕೇಳಬೇಕೆ? ಹೊಟ್ಟೆ ತುಂಬಿ ನಮ್ಮ ಕಿಸೆಯಲ್ಲೆರಡು ದೋಸೆ ಇಟ್ಟುಕೊಂಡೆವು. ತಿಂಡಿ ತಿಂದ ತಕ್ಷಣ ಹೊರಡೋಣ ಎಂದು ತಾಕೀತು ಮಾಡಿದ್ದ ಪ್ರದೀಪ ಮನೆಯ ಸುತ್ತಣ ತೋಟವನ್ನು ನೋಡಿ ಮಾರು ಹೋಗಿದ್ದ. ತೋಟ ಸುತ್ತಿ ಬಂದು, ಹರಟೆ ಹೊಡೆದು, ಮಧ್ಯಾಹ್ನದ ಊಟವಾದ ನಂತರವೂ ಪ್ರದೀಪ ಹೊರಡುವ ಸೂಚನೆಯೇ ಕೊಡದಿದ್ದುದು ನನ್ನನ್ನು ಎಚ್ಚರಿಸಿತು. ಎಲ್ಲಿ ಅಲ್ಲೇ ಒಂದೆರಡು ದಿನ ಉಳಿಯಲು ಅಣಿಯಾಗಿ ಬಿಟ್ಟಾನು ಎಂದು. ಇಬ್ಬರ ಬಾಯಿಯಲ್ಲಿ ತಾಂಬೂಲದ ಕೆಂಪುರಸ ಚಿಮ್ಮಿ ಎಲೆ-ಸುಣ್ಣ-ಅಡಿಕೆ ಮಿಶ್ರಣದ ಗುಂಗೇರಿ ತಲೆ ಒಮ್ಮಲೆ ಗಿರಿಗಿಟ್ಟಲೆ ಹೊಡೆದ ಮೇಲೆಯೇ ಬೆಂಗಳೂರು ನೆನಪಾಗಿದ್ದು. ಜೋಷಿ ಕುಟುಂಬದ ಆತಿಥ್ಯಕ್ಕೆ ನಮ್ಮ ಕೃತಜÐತೆಗಳನ್ನು ತಿಳಿಸಿ, ಹೊರಟು ರಾಷ್ಟ್ರೀಯ ಹೆದ್ದಾರಿ ಹಿಡಿದು ಬೆಂಗಳೂರಿಗೆ ಹೊರಟೆವು. 

ಮಧ್ಯ ರಾತ್ರಿ ಬರುವವಳಿದ್ದ ತನ್ನ ಸ್ನೇಹಿತೆಯನ್ನು ವಿಮಾನ ನಿಲ್ದಾಣದಿಂದ ಕರೆದೋಯ್ಯಬೇಕಾಗಿದ್ದರಿಂದ, ದಾಬಸ್‍ಪೇಟೆಯಲ್ಲಿಯೇ ಎಡಕ್ಕೆ ತಿರುಗಿಸಿ ನಿರ್ಜನವಾದ ಕೈಗಾರಿಕ ಪ್ರದೇಶವನ್ನು ದಾಟುತಿದ್ದಾಗ ಇಬ್ಬರಿಗೂ ನಿಗೂಢ ಕಾರಣಗಳಿಗಾಗಿ ಕೊಂಚ ಭಯವಾಯಿತು. ಪ್ರದೀಪ ಕೇಳಿದ ‘ಅಲ್ಲಾ, ಮೂರು ದಿವಸ ಕಾಡು-ಮೇಡು ಸುತ್ತಿದಾಗಲೇ ಭಯವಾಗಲಿಲ್ಲ. ಬಹುಪಾಲು ಮನುಷ್ಯರೇ ಆಕ್ರಮಿಸಿಕೊಂಡಿರುವ ನಗರಕ್ಕೆ ಬಂದ ತಕ್ಷಣವೇ
ಭಯವಾಗುತ್ತಿದೆಯಲ್ಲಾ. ಎಂತಹ ವಿಪರ್ಯಾಸ ಅಲ್ವಾ?’ ಎಂದು ಕೇಳಿದ. ಹೌದು, ನನಗೂ ಅದೇ ಆಶ್ಚರ್ಯ. ಕಾಡಲ್ಲಿ ಮೂಡದಿದ್ದ ಭಯ ನಗರಕ್ಕೆ ಕಾಲಿಟ್ಟ ತಕ್ಷಣ ಆವರಿಸಿಕೊಂಡಿದ್ದು ಯಾಕೆ? ಒಂದು ಕಡ್ಡಿ ಹಿಡಿದುಕೊಂಡು ಎಷ್ಡು ಕಾಡು-ಮೇಡು ಸುತ್ತಿಲ್ಲ? ಕಾರಿನ ಕಿಟಕಿಯೆಲ್ಲಾ ಮುಚ್ಚಿ, ಏಸಿಯ ತಣ್ಣನೆಯ ಗಾಳಿಯ ತಂಪಿದ್ದರೂ ನಡೆಯದ ಘಟನೆಗಳನ್ನು ಕಲ್ಪಿಸಿಕೊಂಡು ನಮ್ಮ ಮೈ ಕಂಪಿಸಿದ್ದೇಕೆ? ಕಟ್ಟಡಗಳ ಬೃಹತ್ತಾದ ನೆರಳಿನ ಭಯವೇ? ವಾಹನಗಳ ಕರ್ಕಶ ಸದ್ದಿನ ಅಂಜಿಕೆಯೇ? ಕೆರೆಗಳ ಮಧ್ಯೆದಲ್ಲೂ ವಿಷಪೂರಿತ ನೊರೆಗಳ ಜೊತೆ ಬೆಂಕಿ ಕಾಣಿಸಿಕೊಂಡ ವಿಸ್ಮಯವೇ?  ನರಕ ಆಸ್ಪತ್ರೆಗಳಲ್ಲಿನ ಆಕ್ರಂದÀನದ ಕೂಗೆ? ವೇಗದ ಜೀವನದ ತಿರುವುವಿನಲ್ಲಿ ಅಪಘಾತಕ್ಕೀಡಾಗಬಹುದೆಂಬ ದಿಗಿಲೇ? ನಿಧಾನವಾಗಿ ಚಲಿಸಿದರೂ ಹಿತೈಷಿಯ ಪೋಸಿನಲ್ಲಿ ಬಂದು ಮನೆಯ ಬಾಗಿಲ ತಟ್ಟಿ ಪಿಸ್ತೂಲನ್ನು ತಮ್ಮ ಹಣೆಗಿಟ್ಟು ತಮ್ಮ ಪ್ರಾಣ ಪಕ್ಷಿಯನ್ನು ಹೊತ್ತೋಯ್ಯಬಹುದೆಂಬ ಆತಂಕವೇ? ಧೀನ-ದಲಿತರ ಉಸಿರುಗಟ್ಟಿಸಿ, ಅನ್ನದಾತರ ನೇಣು ಬಿಗಿದು, ಶೋಷಿತರೊಟ್ಟಿಗೆ ಶವ ಪೆಟ್ಟಿಗೆಗೆ ಮೊಳೆ ಹೊಡೆಯುತ್ತಿರುವ ದುಸ್ವಪ್ನವೇ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಲಿಗೆ ಹೋಗದೆ ನನ್ನ ಪಾಡಿಗೆ ನಾನಿದ್ದೆ. ಟಿಮ್‍ನ ಘಟನೆಯೊಂದಿಗೆ ಹೆಂಡತಿಯ ಹೆಣ ಹೊತ್ತ ಪ್ರಸಂಗವೂ ಜರುಗಿದ ಮೇಲೆ ಆ ಪ್ರಶ್ನೆಗಳೆಲ್ಲಾ ಮತ್ತೆ ಮರುಕಳಿಸಿದಂತಾಗಿ ಈ ಬರಹವನ್ನು ಬರೆಯಬೇಕಾಗಿ ಬಂತು. ಓದಗರಲ್ಲೂ ಇಂತಹ ಅನುಭವವಾಗಿದ್ದರೆ, ಒಗ್ಗೂಡಿ ಉತ್ತರ ಹುಡುಕಬಹುದು. ಏನಂತೀರ?

ರಾದ

ಮಂಗಳವಾರ, ಆಗಸ್ಟ್ 9, 2016

ಬೇಬಿ ಸಿಟ್ಟಿಂಗ್ ಎಂಬ ಸರ್ಕಸ್...





 ತಮ್ಮನ ಮದುವೆ ಹತ್ತಿರ ಬಂದಂತೆ ಮನೆಯಲ್ಲಿನ ಸಂಭ್ರಮವೂ ಹೆಚ್ಚಾಗಿತ್ತು. ಮೊದಲೆಲ್ಲಾ ಮನೆತನದ ಹತ್ತಾರು ಮಂದಿಯಲ್ಲಿ ಹತ್ತಾರು ದಿನಗಳು ಆವರಿಸುತ್ತಿದ್ದ ಈ ಸಂಭ್ರಮ ಈಗ ನಾಲ್ಕು ಗೋಡೆಯೊಳಗೆ ನಾಲ್ಕು ಜನರಲ್ಲಿ ನಾಲ್ಕು ದಿನಗಳಿಗೆ ಮಾತ್ರ ಸೀಮಿತವಾಗಿದೆ. ವಧು-ವರರ ಕಡೆಯವರೆಲ್ಲಾ ಕೂಡಿ ಅಂಗಡಿಯಲ್ಲಿ ಹೋಗಿ ಬಟ್ಟೆ ಹರಿಸುವ ಪದ್ಧತಿ ಹೋಗಿ ಒಂದು ದಶಕವೇ ಉರುಳಿವೆ. ಈಗ ವಧು ಕಡೆಯವರು ವರನಿಗೆ, ವರನ ಕಡೆಯವರು ವಧುಗೆ ಇಂತಿಷ್ಟು ದುಡ್ಡು ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಮುಂದಿನದ್ದೇನಿದ್ದರೂ ರೆಡಿಮೇಡ್ ಮತ್ತು ಆನ್‍ಲೈನ್ ಶಾಪಿಂಗ್. 
ಹೈಟೆಕ್ ಕಲ್ಯಾಣ ಮಂಟಪಗಳು ಚಪ್ಪರ ತೋರಣಗಳನ್ನು ಹಿಂದೆ ಸರಿಸಿವೆ. ಪಂಚಾಯತಿಯ ಸುಪರ್ಧಿಯಲ್ಲಿರುವ ಅಡುಗೆ ಪ್ರಾತ್ರೆಗಳನ್ನು ಪಡೆದು, ಬಾಣಸಿಗರನ್ನು ಕರೆಸಿ, ಪಟ್ಟಣದ ಮಾರುಕಟ್ಟೆಯಿಂದ ದಿನಸಿ ತರಿಸಿ ಒಲೆಗಳಿಗೆ ಕೊಳ್ಳಿ ಇಡುತ್ತಿದ್ದ ಕಾಲವು ಸವೆದು, ಈಗ ಕೇಟರಿಂಗ್‍ನವರನ್ನು ತಮ್ಮ ಮನೆಗೇ ಕರೆಯಿಸಿ ವ್ಯವಹಾರ ಕುದುರಿಸಿದರೆ ಸಾಕು, ಮದುವೆಯ ದಿನ ವಾಹನಗಳಲ್ಲಿ ಮದುವೆಯ ಔತಣ ಬಂದು ಬೀಳುತ್ತದೆ. ಮದುವೆಯ ಖರ್ಚಿನ ತೂಕ ಹೊತ್ತುಕೊಂಡವರಿಗೆ ತುಸು ಆಸರೆಯಾಗಲು ಹಣ, ಬೆಳ್ಳಿ, ಚಿನ್ನದ ರೂಪದಲ್ಲಿ ಬೀಳುತ್ತಿದ್ದ ಮುಯ್ಯಿ, ಈಗ ನಿರುಪಯೋಗಿ ಪ್ಲ್ಯಾಸ್ಟಿಕ್ ವಸ್ತುಗಳ ರೂಪದಲ್ಲಿ ಬಂದು ಮನೆಯ ಮೂಲೆ ಸೇರುತ್ತಿವೆ. ಅವು ಕ್ರಮೇಣ ಇತರರ ಸಮಾರಂಭಗಳಲ್ಲಿ ಹಂಚಿಹೋಗುತ್ತವೆ. ಗಾಡಿಯನ್ನು ಕಟ್ಟಿ ಮದುವೆಯ ಕರೆಯೋಲೆಯನ್ನು ಹೊತ್ತ್ಯೋಯುತ್ತಿದ್ದವರು, ಕಾಲ ಕ್ರಮೇಣ ಬಸ್ಸು-ರೈಲನ್ನೇರಿ, ನಂತರ ಬೈಕು-ಕಾರುಗಳಿಗೆ ಸೀಮಿತವಾಗಿ, ಈಗ ಇ-ಮೇಲ್, ಫೇಸ್ಬುಕ್, ವಾಟ್ಸಾಪ್‍ಗಳಲ್ಲಿ ಆಮಂತ್ರಿಸುತ್ತಿದ್ದಾರೆ. 
ಸಾವಿರಾರು ಜನರನ್ನು ಸೇರಿಸಿ, ಆರತಕ್ಷತೆಯಲ್ಲಿ ನಿಮಂತ್ರಿತರನ್ನು ಗಂಟೆಗಟ್ಟಳೆ ಸರದಿಯಲ್ಲಿ ನಿಲ್ಲಿಸಿ ತಮ್ಮ ಗಣ್ಯತೆಯನ್ನು ತೋರಿಸುವ ಗೀಳು ಒಂದುಕಡೆಯಾದರೆ, ಸರದಿಯಲ್ಲಿ ಕುಳಿತು ಊಟದೆಲೆಯ ಮೇಲೆ ಬೇಕಿದ್ದು-ಬೇಡದಿದ್ದನ್ನು ಬಡಿಸಿಕೊಂಡು ಅತ್ಯಮೂಲ್ಯ ಆಹಾರವನ್ನು ವ್ಯರ್ಥ ಮಾಡುವುದು ಇನ್ನೊಂದು ಕಡೆ. ಇವೆಲ್ಲಾ ಅಭಿಪ್ರಾಯಗಳು ತಲೆಯಲ್ಲಿ ಸುಳಿದಿದ್ದು ಕಾರಿನಲ್ಲಿ ನನ್ನ ಸತಿ ಮತ್ತು ಅಪ್ಪನನ್ನು ಕೂರಿಸಿಕೊಂಡು, ತಮ್ಮನ ಮದುವೆಯ ಕರೆಯೋಲೆಯನ್ನು ಹೊತ್ತು ಮೈಸೂರಿನ ಗಲ್ಲಿಗಲ್ಲಿಗಳ ತಿರುವಿನಲ್ಲಿ ಕಾರಿನ ಸ್ಟೇರಿಂಗನ್ನು ತಿರುಗಿಸುತ್ತಿದ್ದಾಗ. 

10 ತಿಂಗಳ ನಮ್ಮ ಮಗಳು ಸ್ಮಯಾಳನ್ನು ಮೈಸೂರಿನ ಉದಯಗಿರಿಯಲ್ಲಿರುವ ನನ್ನ ಪತ್ನಿ ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಈಗಾಗಲೇ ಅವಳಿಗೆ ನಾನು ಮತ್ತು ಪೂಜಾ ತನ್ನ ಹತ್ತಿರದವರು ಎಂಬ ಭಾವನೆ ಮೂಡಿಯಾಗಿತ್ತು. ಹೊಸಬರ ಜೊತೆ ಒಗ್ಗಿಕೊಳ್ಳಲು ಬಿಟ್ಟರೆ, ತನ್ನ ಅಪ್ಪ-ಅಮ್ಮನ ಹುಡುಕಾಟದಲ್ಲಿ ಅತ್ತ ಇತ್ತ ಇಣುಕುತ್ತಿದ್ದಳು. ತುಸು ಹೊತ್ತಾದರೆ ನಮ್ಮನ್ನು ನೆನಪಿಸಿಕೊಂಡು ರಚ್ಚೆ ಹಿಡಿಯುತ್ತಿದ್ದಳು. ಅವಳ ಅಳುವನ್ನು ನಿಲ್ಲಿಸುವ ಕಲೆಯುಳ್ಳವರು ಗೆಲ್ಲುತ್ತಿದ್ದರು. ಇಲ್ಲದವರು ಗಾಬರಿಯಾಗಿ ನಮಗೆ ಕರೆಮಾಡಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದ್ದರು. ಅವಳನ್ನು ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟಾಗಲೂ ಅದೇ ಪರಿಸ್ಥಿತಿ ಉಂಟಾಯಿತು. ಸಂಜೆ ನಾಲ್ಕಾಗುವವರೆಗೆ ಪೂಜಾಳಿಗೆ ಕಡಿಮೆಯೆಂದರೂ 20 ಕರೆಗಳು ಬಂದಿದ್ದವು. ಆಮಂತ್ರಿಸುವ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ, ವಾಪಸ್ಸು ಹೋಗಿ ನೋಡಿದಾಗ ಸ್ಮಯಾ ಅತ್ತು ಕರೆದು ಸುಸ್ತಾದಂತೆ ಕಂಡಳು. ನಮ್ಮನ್ನು ನೋಡಿ ತುಸು ಹರ್ಷವಾದಂತೆ ಕಂಡರೂ, ಎಂದಿನ ಚೆಟುವಟಿಕೆ ಇರಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಮೈ ಬಿಸಿಯಾಗಿತ್ತು. ಹೆತ್ತವರ ಕರಳು ಚುರುಕ್ ಎಂದಿತ್ತು. 
ಹಳೆಯ ಪದ್ಧತಿಯಂತೆ ಮದುವೆಯ ಪ್ರಯುಕ್ತ ನಮ್ಮ ಮನೆಯ ಮೂಲೆ ಮೂಲೆಯನ್ನೂ ಸ್ವಚ್ಛಮಾಡುವ ಕೆಲಸ. ಪೂಜಾಳಿಗೆ ಮಾಹಿತಿ ತಂತ್ರಜ್ಞಾನದ ಕೆಲಸ. ಅವಳ ಅಜ್ಜಿಯ ಮನೆಯಲ್ಲಿ ವೃದ್ಧರನ್ನು ಬಿಟ್ಟರೆ ಎಲ್ಲರದೂ ದುಡಿಯುವ ಕೈಗಳು. ಮುಂದಿನ ಕೆಲವು ದಿನಗಳು ಎಲ್ಲರೂ ತಮ್ಮ ಕೆಲಸಗಳಲ್ಲಿ ಮಗ್ನರಾಗಿ, ಸ್ಮಯಾಳನ್ನು ನೋಡಿಕೊಳ್ಳಲು ಶಿಸುಪಾಲಕರ ಕೊರತೆ ಎದ್ದು ಕಾಣುತ್ತಿತ್ತು.  ಪೂಜಾಳ ಚಡಪಡಿಕೆಯನ್ನು ಗಮನಿಸಿದ ನಾನು, ಕೆಲದಿನಗಳು ಸ್ಮಯಾಳ ಪೂರ್ಣ ಪ್ರಮಾಣದ ಶಿಸುಪಾಲಕನಾಗಿ ಅವಳ ಅಜ್ಜಿಯ ಮನೆಯಲ್ಲೇ ಉಳಿಯಲು ಒಪ್ಪಿಕೊಂಡೆ. ದಾದಿಯ ಕೆಲಸ ಅಷ್ಟು ಸುಲಭದ ಮಾತಲ್ಲ. ನಿನಗೆ ಆಗದ ಕೆಲಸ ಎಂದು ಹಲವು ಜನ ಎಚ್ಚರಿಸಿದರು. 

ಸ್ಮಯಾ ಹುಟ್ಟಿದಾಗಿನಿಂದ ಅವಳ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದ ನನಗೆ, ಅವಳು ಹೆಚ್ಚು ತೊಂದರೆ ಕೊಡುವುದಿಲ್ಲವೆಂಬ ಪಿತಾ-ವಿಶ್ವಾಸವಿತ್ತು. ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಗಿಟ್ಟಿಸಿದರೆ ಸಾಕು, ಸದಾ ಸಂತೋಷದಿಂದ ತನ್ನ ತೆಕ್ಕೆಯಲ್ಲಿಟ್ಟ ನಾಲ್ಕು ಆಟದ ಸಾಮಾನಿನ ಜೊತೆ ಇಡೀ ದಿನವೆಲ್ಲಾ ಕೆಳೆಯುವಳು. ಬೆಳಗ್ಗೆ ನನಗಿಂತ ಮುಂಚೆ ಎದ್ದು, ನನ್ನ ಮುಖವನ್ನು ಪರಚಿ ಎಚ್ಚರಿಸುತ್ತಿದ್ದನ್ನು ನಾನು ಪ್ರತಿಭಟಿಸಿ ಕಂಬಳಿಯನ್ನು ಮುಖದ ಮೇಲೆ ಹೊದ್ದರೆ, ತನ್ನ ಶಕ್ತಿಯನ್ನೆಲ್ಲಾ ಸೇರಿಸಿ ಅದನ್ನು ಸರಿಸುತ್ತಿದ್ದಳು. ಮುಂದಿನ ಒಂದು ತಾಸು ಹಾಸಿಗೆಯ ಮೇಲೆಯೇ ನನ್ನ ಅವಳ ಚೇಷ್ಟೆ-ತಮಾಷೆ ನಡೆದು, ಕೋಣೆಯ ಕೋನೆ ಕೋನೆಗಳಿಗೆ  ಸಂತೋಷ ಹರಡುತ್ತಿತ್ತು. ಹೊರಗಡೆ ಹಸು, ನಾಯಿ, ಬೆಕ್ಕು ಮತ್ತ್ಯಾವುದೇ ಪ್ರಾಣಿಯಿರಲಿ, ಆಗಸದಲ್ಲಾರು ಪಕ್ಷಿ ಸಂಕಲುವೇ ಇರಲಿ, ಅವನ್ನು ನೋಡಿ ಗುರುತಿಸಿ ಒಂದೇ ರೀತಿಯಲ್ಲಿ ‘ಅಂಬಾ.. ಅಂಬಾ’ ಎಂದು ಸಂಭೂದಿಸುತ್ತಿದ್ದಳು. ಅವುಗಳ ಹತ್ತಿರಕ್ಕೆ ಕರೆದೋಯ್ದರೆ, ಕೊಂಚ ಹೆದರಿ, ತಿರುಗಿ ನನ್ನ ಎದೆಯನ್ನಪ್ಪಿ ಹಿಡಿಯುತ್ತಿದ್ದಳು. ಹೆದರಿದಳೇನೋ ಎಂದು ತಿಳಿದು ದೂರ ಹೋದರೆ, ಅವುಗಳ ಹತ್ತಿರವೇ ನಿಲ್ಲುವಂತೆ ಆಜ್ಞಾಪಿಸುತ್ತಿದ್ದನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತಿದ್ದೆ. 

ತಾರಸಿಯಲ್ಲಿ ನೇತಾಗಿದ್ದ ಜೋಕಾಲಿಯಲ್ಲಿ ಕುಳಿತು, ಸ್ಮಯಾಳನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅತ್ತಿತ್ತ ತೂಗುತ್ತಾ, ನನ್ನ ಕಂಠಸಿರಿಯಲ್ಲಿ ಹಳೆ ಕನ್ನಡ ಹಾಡುಗಳನ್ನು ಹರಕು ಮುರುಕಾಗಿ ಹಾಡುತ್ತಾ ಅವಳನ್ನು ನಿದ್ರಾ ಲೋಕಕ್ಕೆ ಜಾರಿಸುವ ತವಕದಲ್ಲಿರುವಾಗ, ನನ್ನ ಹಾಡಿಕೆಯನ್ನು ಕುಹಕವಾಡಲೆಂದೇ  ಹತ್ತಿರದ ಯಾವುದೋ ಮರದ ಕೊಂಬೆಯ ಮೇಲೆ ಕುಳಿತು ತನ್ನ ಸ್ವಚ್ಛ ಮಾಧುರ್ಯ ಕಂಠದಿಂದ ಹಾಡುವ ಕೋಗಿಲೆಯ ಸಂಗೀತ ಕಚೇರಿಯನ್ನು ಗುರುತಿಸಿ ಎಚ್ಚರಗೊಳ್ಳುತ್ತಿದ್ದನ್ನು ನೋಡಿ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲಾ. ನಮ್ಮ ನಿತ್ಯ ಚಟುವಟಿಕೆಗಳ ಶೈಲಿಯನ್ನು ಗ್ರಹಿಸಿ ನಮ್ಮಂತೆಯೇ ಅನುಕರಿಸುವ ಅವಳ ಬುದ್ಧಿಶಕ್ತಿಗೆ ನಾನು ಮಾರುಹೋಗಿದ್ದೆ. ಅದರಂತೆಯೇ ‘ಟಾಟಾ’ ಮಾಡುವುದು, ಚಪ್ಪಾಳೆ ತಟ್ಟುವುದು, ಹ್ಯಾಂಡ್ಸ್-ಅಪ್ಪ್ ಎಂದರೆ ಕಳ್ಳರಂತೆ ತನ್ನ ಎರಡೂ ಕೈಗಳನ್ನು ಎತ್ತಿ ಹಿಡಿಯುವುದು, ಹೊಸಬರು ಕರೆದೆರೆ ತನ್ನ ತಲೆಯನ್ನಯ ಅಳ್ಳಾಡಿಸಿ ‘ನಾನು ಬರಲ್ಲಾ’ ಎಂದು ಸೂಚಿಸುವ ಬಗೆ ಎಲ್ಲರಲ್ಲೂ ನಗು ತರಿಸುತ್ತಿತ್ತು. ಸ್ನಾನ ಮಾಡಿಸಿದ ನಂತರ, ಬಕೆಟ್‍ನಲ್ಲಿ ಉಳಿದ ಬೆಚ್ಚನೆಯ ನೀರಿನಲ್ಲಿ ಅವಳನ್ನು ಕುಳಿಸಿದಾಗ, ಉತ್ಸಾಹಗೊಂಡು ನೀರನ್ನು ತನ್ನ ಎರಡೂ ಕೈಗಳಿಂದ ಪಟಪಟನೆ ಬಡಿಯುತ್ತಾ ಸಂಭ್ರಮಿಸಿದ್ದಳು. 

ನಾಯಿ-ಬೆಕ್ಕು-ಕಾಗೆ-ಹದ್ದು ಮತ್ತು ಇತರೆ ಪಕ್ಷಿಗಳಿದ್ದ ಉದ್ಯಾನ ವನಕ್ಕೆ ಪ್ರತೀ ಸಂಜೆ ಅವಳನ್ನು ಓಯ್ದರೆ, ಜುರಾಸಿಕ್ ಪಾರ್ಕ್ ಕಂಡಷ್ಟೇ ಖುಷಿ ಪಡುತ್ತಿದ್ದಳು. ಮನೆಯಲ್ಲಿ ನೆಲದ ಮೇಲೆ ತವೆಯುತ್ತಿದ್ದ ಅವಳು ಹುಲ್ಲಿನ ಹಾಸಿನ ಮೇಲೆ ಅಂಬೆಗಾಲಿಡುವುದನ್ನು ಕಲಿತು ಇರುವೆಗಳನ್ನು ಹಿಡಿಯುವ ಸರ್ಕಸ್ ಬೇರೆ. ಹುಲ್ಲಿನ ಮಧ್ಯೆ ಸಿಗುವ ಮರದ ತುಂಡುಗಳನ್ನು ಎತ್ತಿಕೊಂಡು ವಿಜ್ಞಾನಿಯಂತೆ ಪರಿಶೀಲಿಸುತ್ತಿದ್ದಳು. ಆಕಾಶದಿಂದ ಅವಳ ಮೈಮೇಲೆ ನಾಲ್ಕು ಹನಿಬಿದ್ದರೆ ಪುಳಕಿತಗೊಂಡು, ಅಷ್ಟದಿಕ್ಕಿಗೂ ತನ್ನ ಕಣ್ಣುಗಳನ್ನು ನೆಟ್ಟಿ ಹನಿಗಳು ಎಲ್ಲಿಂದ ಬೀಳುತ್ತಿರಬಹುದೆಂದು ಪತ್ತೇದಾರಿಕೆ ಕೆಲಸ ಮಾಡುತ್ತಿದ್ದಳು. ಕಣ್ಣುಗಳನ್ನು ಆಕಾಶದ ಮೇಲೆ ನೆಟ್ಟಿ, ಯಾವುದೋ ಯೋಚನಾ ಲಹರಿಯಲ್ಲಿ ಮುಳುಗಿರುತ್ತಿದ್ದ ನನ್ನ ಎದೆಯ ಮೇಲೆ ತನ್ನ ಪುಟ್ಟ ಕೈಗಳಿಂದ ಬಡಿದು ವಾಸ್ತವಕ್ಕೆ ಕರೆತರುತ್ತಿದ್ದಳು. ಟಿವಿಯ ಪರದೆಯ ಮೇಲೆ ಚಲನ ಚಿತ್ರದ ಹಾಡುಗಳನ್ನು ಬಿತ್ತರಿಸಿದರೆ, ತಾನೂ ಹಾಡುವಂತೆ ‘ಯಾ ಯಾ ಯಾ .. ಆ ಆ ಆ’ ಎಂದು ಒದರುತ್ತಿರುವುದನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಖುಷಿಪಟ್ಟೆ. ಅವಳಿಗೆ ಊಟ ಮಾಡಿಸುವ ಕೆಲಸವಂತೂ, ಯಾವ ವ್ಯಾಯಾಮಕ್ಕೂ ಕಡಿಮೆಯಿಲ್ಲದಂತೆ ನನ್ನ ಮೈಯ ಕೊಬ್ಬನ್ನು ಕರಗಿಸಿತು. ಸದಾ ನಗುತ್ತಿರುವುದನ್ನು ಕಂಡು ಅಸೂಹೆಗೊಂಡು, ಅವಳ ತೊಡೆಯನ್ನು ಚಿವುಟಿದಾಗ ಅವಳು ಅಳುವುದನ್ನು ನೋಡಿ ವಿಕೃತ ಸಂತೋಷ ಪಡುತ್ತಿದ್ದೆ. ನಂತರ ಸಮಾಧಾನ ಪಡಿಸಿ ತಂದೆಯ ಸಹಜ ಕಾಳಜಿಯನ್ನು ಮೆರೆಯುತ್ತಿದ್ದೆ. ನನ್ನ ಮತ್ತು ಸ್ಮಯಾಳ ಕೆಮಿಷ್ಟ್ರಿ ನೋಡಿದ ಪೂಜಾ ಅಸೂಹೆ ಪಟ್ಟಿದ್ದೂ ಉಂಟು.

ಆಕಸ್ಮಿಕವಾಗಿ ಒದಗಿಬಂದ ಈ ಶಿಶುಪಾಲಕನ ಕೆಲಸದ ಮಧ್ಯೆ ಸ್ಮಯಾಳ ಜೊತೆ ತುಂಟಾಟ ಚೇಷ್ಟೆಗಳೊಂದಿಗೆ ಕಳೆದ ಆ 5 ದಿನಗಳು ನನಗೆ ಹೊಸ ಅನುಭವವನ್ನು ಕೊಟ್ಟು ಬೇರೆಯ ಕಿನ್ನರಿ ಲೋಕಕ್ಕೇ ಕರೆದೋಯ್ದದಂತೂ ನಿಜ. ಒಬ್ಬ ತಂದೆಯಾಗಿ ಈ ಕ್ಷಣಗಳನ್ನು ಕಳೆದ ನನಗೆ, ಮಕ್ಕಳ ಮೇಲಿದ್ದ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಹೆಚ್ಚು ಪಕ್ವವಾಗುವುದಕ್ಕೆ ಅನುಕೂಲವಾಯಿತು.  ಆ ದಿನಗಳು ಆಗಿಂದಾಗ್ಗೆ ಬರಲೆಂದು ಆಶಿಸುತ್ತೇನೆ.

ರಾದ