ಮೈಸೂರಿನ ಒಂದು ಕಾಲೇಜಿನಲ್ಲಿ ಹೆಚ್.ಐ.ವಿ/ಏಡ್ಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಣ್ಣ ಜಾಥಾ ಮುಗಿಸಿ ದೊಡ್ಡದಾದ ಕೋಣೆಯೊಂದರಲ್ಲಿ ವೈದ್ಯನುದುರಿಸುವ ನಾಲ್ಕು ಮಾಹಿತಿ ತುಂಬಿದ ಮಾತುಗಳನ್ನು ಆಲಿಸುತ್ತಿದ್ದಾಗ ಪೆಚ್ಚುಮೋರೆ ಹಾಕಿಕೊಂಡು ಜರ್ಮನಿಯ ಹದಿಹರಯದ ಟಿಮ್ ಒಳಗೆ ಬಂದು ಖಾಲಿ ಇದ್ದ ಒಂದು ಕುರ್ಚಿಯನ್ನು ಎಳೆದು ಕುಳಿತ. ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಿರತನಾಗಿದ್ದ ನನಗೆ ತಕ್ಷಣ ಅವನನ್ನು ವಿಚಾರಿಸಿಕೊಳ್ಳಲಾಗಲಿಲ್ಲ. ಬಿಸಿಲಿನಲ್ಲಿ ನಡೆದು ದಣಿವಾಗಿರಬಹುದೆಂದು ಎಣಿಸಿದ್ದೆ. ಕಾರ್ಯಕ್ರಮ ಸುಲಲಿತವಾಗಿ ಮುಂದುವರಿದಿದ್ದರಿಂದ,
ಸ್ವಲ್ಪ ವಿಚಲಿತನಾದಂತೆ ಕಂಡ ಟಿಮ್ನನ್ನು ಪಕ್ಕಕ್ಕೆ ಕರೆದು ವಿಚಾರಿಸಿದೆ. ಸಿಟಿ ಬಸ್ ನಿಲ್ದಾಣದಲ್ಲಿ ಕಿಕ್ಕಿರಿದ ಗುಂಪಿನ ಜೊತೆಯಲ್ಲೇ ಬಸ್ಸನ್ನು ಏರುತ್ತಿದ್ದಾಗ ಖದೀಮರು ಕ್ರೆಡಿಟ್ ಕಾರ್ಡ್, ವಿಮೆಯ ಕಾರ್ಡ್ ಮತ್ತು 205 ಯೂರೋ ಇದ್ದ ಅವನ ಕೈಚೀಲವನ್ನು ಎಗರಿಸಿದ್ದರು. ಭಾರತಕ್ಕೆ ಬಂದ ಎರಡನೆ ವಾರವೇ ಘಟಿಸಿದ ಈ ಕಹಿ ಅನುಭವದಿಂದ ಅವನ ಮುಖ ಮಂಡಲ ತುಸು ನಿಸ್ತೇಜವಾಗಿತ್ತು. ತಮಾಷೆ ಮಾಡಿ ನಡೆದ್ದದ್ದೂ ಏನೂ ಇಲ್ಲ. ಮಾನವ ಜಗತ್ತಿನಲ್ಲಿ ಇವೆಲ್ಲಾ ಸರ್ವೇಸಾಮಾನ್ಯವೆಂದು ಅವನಿಗೆ ಸಮಾಧಾನ ಹೇಳಿ, ತುರ್ತಾಗಿ ಮಾಡಬೇಕಾದ ಕೆಲಸಗಳನ್ನು ಮನವರಿಕೆ ಮಾಡಿಕೊಟ್ಟೆ. ಜರ್ಮನಿಯಲ್ಲಿರುವ ಅವನ ತಾಯಿಗೆ ಕರೆಮಾಡಿ, ಅವನ ಕಾರ್ಡ್ಗಳನ್ನು ಬಳಸಿ ದುರುಪಯೋಗ ಪಡಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಮುಚ್ಚಿಸಲಾಯಿತು. ಅವನ ಕೂಡಿ ಬಿರುಬಿರನೆ ಆರಕ್ಷಕ ಠಾಣೆಗೆ ಹೋದರೆ, ನಮ್ಮ ಅಹವಾಲು ಸ್ವೀಕರಿಸುವ ವ್ಯವದಾನವಿರಲಿಲ್ಲ. ಬದಲಿಗೆ ಅಸಂಬದ್ಧ ಪಶ್ನೆಗಳನ್ನು ಕೇಳಿ ನಮ್ಮನ್ನೇ ಸುಸ್ತೊಡಿಸಿದರು. ಆನ್ಲೈನ್ ದೂರು ಕೊಡಿ ಎಂದರು. ವಾಪಸ್ಸು ಬಂದು ಆನ್ಲೈನ್ ದೂರು ಕೊಡಲು ಹೋದರೆ, ಅವರ ವೆಬ್ಸೈಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನನ್ನ ಕಿಸೆಯಿಂದ ಅವನ ಮೊಬೈಲ್ಗೆ ಮತ್ತು ಅವನ ಜೇಬಿಗೆ ಒಂದಷ್ಟು ರೊಕ್ಕ ಇಳಿಸಿ ಔದಾರ್ಯ ಮೆರೆದು ಮನೆಗೆ ಬಂದೆ. ಮನಸ್ಸು ಭಾರವಾದಂತಾಗಿ ಒಂದು ವಾರ ಹಿಮ್ಮುಖವಾಯಿತು.
ತಮ್ಮ ರೋಷನ್ನ ಮದುವೆಯ ಸಡಗರ ಮುಗಿದು, ಬೀಗರಿಗೆ ನಮ್ಮ ಮನೆಯಲ್ಲಿ ಔತಣ ಕೂಟ ಏರ್ಪಟ್ಟಿತ್ತು. ಅದ್ಯಾವ ಜಂಜಾಟಕ್ಕೂ ಸಿಲುಕದೇ ಖಾದಿ ಜುಬ್ಬಾ ಧರಿಸಿ ಸ್ಮಯಾಳನ್ನು ತೊಡೆಯ ಮೇಲೆ ಕುಳಿಸಿಕೊಂಡು ಆಟವಾಡುತ್ತಿದ್ದೆ. ಊಟದ ನಂತರ ನಾನು ಮತ್ತು ನನ್ನ ತಮ್ಮ ಸಾಗರ್ (ದೊಡ್ಡಪ್ಪನ ಮಗ) ಮಾತನಾಡಲು ಕುಳಿತೆವು. ಇರುವ ನೌಕರಿಯನ್ನು ಬಿಟ್ಟು, ಓದು ಮುಂದುವರಿಸುವ ಸಲುವಾಗಿ ಮರುದಿನವೇ ‘ಅವಕಾಶಗಳು ತುಂಬಿದ ದೇಶ’ ಎಂದು ಕರೆಯಲ್ಪಡುವ ಅಮೇರಿಕಾಗೆ ಪ್ರಯಾಣ ಬೆಳೆಸಲು ಅವನು ಸಜ್ಜಾಗಿದ್ದರೂ, ಕೊನೆ ಕ್ಷಣಗಳ ಧರ್ಮ ಸಂಕಟದಲ್ಲಿ ತೇಲುತ್ತಿದ್ದ. ಅವನ ಧರ್ಮ ಸಂಕಟದಲ್ಲಿ ಭಾಗಿಗಳಾಗಿ ಹಿತೈಷಿಗಳ ಹಿಂಡು ಅವನನ್ನು
ವಿಮಾನ ನಿಲ್ದಾಣದಲ್ಲಿ ಬಿಟ್ಟು, ಕಣ್ಣುಗಳಿಂದ ನಾಲ್ಕು ಹನಿಗಳ ಚೆಲ್ಲಿ ಆ ಪ್ರಯಾಣದ ಅವಶ್ಯಕತೆ ಬಗ್ಗೆ ಅವನಿಗೇ ಜಿಘ್ನಾಸೆ ಮೂಡುವಂತೆ ಮಾಡುವುದು ವಾಡಿಕೆ. ಅದರಂತೆಯೇ ನಾನೂ ವಿಮಾನ ನಿಲ್ದಾಣಕ್ಕೆ ಬರುತ್ತೇನೆಂದು ತಿಳಿಸಿದೆ. ನನ್ನ ಅದೃಷ್ಟಕ್ಕೆ ಹಾಗೇ ಹೇಳಿದ ಕೆಲ ಕ್ಷಣಗಳಲ್ಲೇ ನನ್ನ ಸ್ನೇಹಿತ ಪ್ರದೀಪ ಕರೆ ಮಾಡಿ, ಹೊರಗಡೆ ಎಲ್ಲಾದರೂ ಲಾಂಗ್ ಡ್ರೈವ್ ಹೋಗೋಣ ಬಾ ಎಂದು ಹೇಳಿ ನನ್ನನ್ನು ಸಂಕಷ್ಟಕ್ಕೆ ಸಿಲುಕಿಸಿದ. ಬರುತ್ತೇನೆಂದು ಹೇಳಿ ವಿಮಾನ ನಿಲ್ದಾಣಕ್ಕೆ ಹೋಗದೇ ಹೋದರೆ ಎಲ್ಲಿ ಸಾಗರ್ಗೆ ಬೇಸರವಾಗುತ್ತದೋ ಎಂಬ ಭಯ ಒಂದು ಕಡೆಯಾದರೆ ಪ್ರದೀಪ ಕೂಡ ಜಪಾನ್ಗೆ ಹೊರಡಲು ಸಿದ್ಧನಾಗಿದ್ದರಿಂದ ಅವನ ಬೇಡಿಕೆಯನ್ನೂ ಕೂಡ ತಿರಸ್ಕರಿಸುವಂತಿಲ್ಲ. ‘ಸ್ವಲ್ಪ ಟೈಮ್ ಕೊಡು ಮಾರಾಯ, ಯೋಚಿಸಿ ಹೇಳ್ತೀನಿ’ ಎಂದು ಹೇಳಿದರೆ ‘ಯೋಚಿಸುವುದಕ್ಕೆ ಏನಿದೆ. ಮೈಸೂರಿನಲ್ಲಿದ್ದು ನೀನು ಕಡೆದು ಕಟ್ಟಾಕುವುದು ಅಷ್ಟರಲ್ಲೇ ಇದೆ. ಸುಮ್ನೆ ಬಾ ಮಾರಾಯ. ಸಾಗರ ಕಡೆ ಸುತ್ತಾಡಿ ಬರುವ’ ಎಂದು ಕುಹಕವಾಡಿದ. ಬಿಡುವೆಂದರೆ ಏನೆಂದು ತಿಳಿಯದಷ್ಟು ಬಿಡುವಿದ್ದರಿಂದ, ಕುಳಿತು ಯೋಚಿಸಿದೆ. ಎಂತಹ ಕಾಕತಾಳೀಯ. ಮರುದಿನ ವಿಮಾನ ನಿಲ್ದಾಣ ಹೋಗಬೇಕಾದದ್ದು ಕೂಡ ಸಾಗರ್ನ ಕಳುಹಿಸಿಕೊಡುವುದಕ್ಕೆ. ಇವನೂ ಕೂಡ ಸಾಗರಕ್ಕೆ ಕರೆಯುತ್ತಿದ್ದಾನೆ. ಎರಡು ಸಾಗರರಲ್ಲಿ ಯಾವುದಕ್ಕೆ ಹೋಗುವುದು? ಅಳೆದು ತೂಗಿ ಸಾಗರದ ಜೊತೆ ಶಿರಸಿಯನ್ನು ಜೋಡಿಸಿಕೊಂಡು ಪ್ರದೀಪನ ಜೊತೆ ಹೊರಟೇ ಬಿಟ್ಟೆ.
ಅರಸೀಕೆರೆ-ಶಿವಮೊಗ್ಗ ಮೂಲಕ ಹೆಗ್ಗೋಡು ತಲುಪಿ ನಿನಾಸಂ ರಂಗ ಶಾಲೆಯನ್ನು ನೋಡಿ, ಪಕ್ಕದಲ್ಲೇ ಸಿಕ್ಕ ರಂಗಕರ್ಮಿ ಪ್ರಸನ್ನರವರ ಚರಕ ಉದ್ಯಮವನ್ನು ವೀಕ್ಷಿಸಿದ ನಂತರ ಪ್ರದೀಪನ ಇಚ್ಛೆಯಂತೆ ದೋಣಿಯನ್ನೇರಿ ಸಿಗಂದೂರು ಸುತ್ತಿ ಸಾಗರದ ಮೂಲಕ ಜೋಗ ತಲುಪಿದಾಗ ರಾತ್ರಿ 10 ಆಗಿತ್ತು. ಶ್ರೀರಂಗ ರೆಸಿಡೆನ್ಸಿಯಲ್ಲಿ ರಾತ್ರಿ ತಂಗಿ, ಬೆಳಗ್ಗೆ ಜೋಗದ ಪಾತಾಳವನ್ನು ಇಳಿದು ಅತ್ತಿ ಎಲ್ಲಾ ಕೋನಗಳಿಂದಲೂ ಜಲಪಾತದ ರಮಣೀಯ ಮನೋಹರ ದೃಶ್ಯವನ್ನು ಕಣ್ಣು ತುಂಬಿಕೊಳ್ಳುವಷ್ಟರಲ್ಲಿ ಕಾಲುಗಳು ಬಿದ್ದು ಹೋಗಿದ್ದವು. ಜೋಗದಲ್ಲೇ ಮಧ್ಯಾಹ್ನದ ಊಟ ಮುಗಿಸಿ ಮುನ್ನಡೆದು, ದಾರಿಯಲ್ಲಿ ಸಿಕ್ಕ ಕುರುಚಲು ಕಾಡಿನೊಳಗೆ ನವಿಲ ಹಿಂದೆ ಓಡಿ ನಾವೂ ಕೂಡ ಸಾಹಸಿಗಳೆಂದು ತೃಪ್ತಿ ಪಟ್ಟೆವು. ಚಂದ್ರಗುತ್ತಿ ನೋಡಿ, ಶಿರಸಿ ತಲುಪಿ ಮಾರಿಕಾಂಬ ದೇವಸ್ಥಾನದಲ್ಲಿ
ಸಂಗೀತ ಕಚೇರಿ ನೋಡುವ ನೆಪದಲ್ಲಿ ಸೀರೆಯುಟ್ಟ ಲಲನೆಯರನ್ನು ನೋಡಿದಾಗ ಮರುಭೂಮಿಯಾಗಿ ಕಾಣುತ್ತಿದ್ದ ಜಗತ್ತಿನಲ್ಲಿ ಪಕ್ಕನೆ ಮರುವನ ಗೋಚರಿಸಿದಂತಾಯಿತು. ‘ಕಾಣದ ಕಡಲಿಗೆ’ ಗೆಳೆಯರಾದ ಲಕ್ಷ್ಮಿನಾರಾಯಣ ಹೆಗ್ಗಡೆಯವರ ಮನೆಯಲ್ಲಿ ಹೊಟ್ಟೆ ತುಂಬಾ ಉಂಡು ಹೋಟಲಿನಲ್ಲಿ ಬಿದ್ದುಕೊಂಡೆವು. ಮರುದಿನ ಬನವಾಸಿ ನೋಡುವುದೋ ಅಥವಾ ನನ್ನ ಸ್ನೇಹಿತ ಅನಂತ ಜೋಷಿಯ ಮನೆ ಹೊಕ್ಕು ಕಾಲ ಕಳೆಯುವುದೋ ಎಂಬ ಗೊಂದಲ. ಮುಂಗೋಪಿಯಾದ ಪ್ರದೀಪನನ್ನು ಒಲಿಸಿ ಹುಬ್ಬಳ್ಳಿ ರಸ್ತೆಯಲ್ಲಿ ತೆರಳಿ ಇಸಲೂರುನಲ್ಲಿ ಎಡಕ್ಕೆ ಹೆಮ್ಮಾಡಿ ಮಾವಿನಕಟ್ಟೆ ಕಡೆಗೆ ತಿರುಗಿ ಮಾವಿನಸರದಲ್ಲಿರುವ ಜೋಷಿಯ ಮನೆ ತಲುಪಿದಾಗ ನಮ್ಮಿಬ್ಬರ ಹೊಟ್ಟೆ ಚುರುಗುಟ್ಟುತ್ತಿತ್ತು. ಕೈಕಾಲು ಮುಖ ತೊಳೆದು ಇಬ್ಬರೂ ಅವರ ಅಡುಗೆ ಕೋಣೆಯಲ್ಲೇ ಆಸೀನರಾದೆವು. ಜೋಷಿಯ ಅಮ್ಮ ಸಾವಾದಾನವಾಗಿ ಅಕ್ಕಿ ದೋಸೆ, ಹಲಸಿನ
ದೋಸೆಯನ್ನು ಮಗಚಿದ್ದೇ ಮಗಚಿದ್ದು. ದೋಸೆಯ ಜೊತೆ ಕಾಯಿ ಚಟ್ನಿ, ಬೆಲ್ಲ, ತುಪ್ಪ, ಹಲಸಿನ ಜಾಮ್ ಕೊಟ್ಟರೆ ಕೇಳಬೇಕೆ? ಹೊಟ್ಟೆ ತುಂಬಿ ನಮ್ಮ ಕಿಸೆಯಲ್ಲೆರಡು ದೋಸೆ ಇಟ್ಟುಕೊಂಡೆವು. ತಿಂಡಿ ತಿಂದ ತಕ್ಷಣ ಹೊರಡೋಣ ಎಂದು ತಾಕೀತು ಮಾಡಿದ್ದ ಪ್ರದೀಪ ಮನೆಯ ಸುತ್ತಣ ತೋಟವನ್ನು ನೋಡಿ ಮಾರು ಹೋಗಿದ್ದ. ತೋಟ ಸುತ್ತಿ ಬಂದು, ಹರಟೆ ಹೊಡೆದು, ಮಧ್ಯಾಹ್ನದ ಊಟವಾದ ನಂತರವೂ ಪ್ರದೀಪ ಹೊರಡುವ ಸೂಚನೆಯೇ ಕೊಡದಿದ್ದುದು ನನ್ನನ್ನು ಎಚ್ಚರಿಸಿತು. ಎಲ್ಲಿ ಅಲ್ಲೇ ಒಂದೆರಡು ದಿನ ಉಳಿಯಲು ಅಣಿಯಾಗಿ ಬಿಟ್ಟಾನು ಎಂದು. ಇಬ್ಬರ ಬಾಯಿಯಲ್ಲಿ ತಾಂಬೂಲದ ಕೆಂಪುರಸ ಚಿಮ್ಮಿ ಎಲೆ-ಸುಣ್ಣ-ಅಡಿಕೆ ಮಿಶ್ರಣದ ಗುಂಗೇರಿ ತಲೆ ಒಮ್ಮಲೆ ಗಿರಿಗಿಟ್ಟಲೆ ಹೊಡೆದ ಮೇಲೆಯೇ ಬೆಂಗಳೂರು ನೆನಪಾಗಿದ್ದು. ಜೋಷಿ ಕುಟುಂಬದ ಆತಿಥ್ಯಕ್ಕೆ ನಮ್ಮ ಕೃತಜÐತೆಗಳನ್ನು ತಿಳಿಸಿ, ಹೊರಟು ರಾಷ್ಟ್ರೀಯ ಹೆದ್ದಾರಿ ಹಿಡಿದು ಬೆಂಗಳೂರಿಗೆ ಹೊರಟೆವು.
ಮಧ್ಯ ರಾತ್ರಿ ಬರುವವಳಿದ್ದ ತನ್ನ ಸ್ನೇಹಿತೆಯನ್ನು ವಿಮಾನ ನಿಲ್ದಾಣದಿಂದ ಕರೆದೋಯ್ಯಬೇಕಾಗಿದ್ದರಿಂದ, ದಾಬಸ್ಪೇಟೆಯಲ್ಲಿಯೇ ಎಡಕ್ಕೆ ತಿರುಗಿಸಿ ನಿರ್ಜನವಾದ ಕೈಗಾರಿಕ ಪ್ರದೇಶವನ್ನು ದಾಟುತಿದ್ದಾಗ ಇಬ್ಬರಿಗೂ ನಿಗೂಢ ಕಾರಣಗಳಿಗಾಗಿ ಕೊಂಚ ಭಯವಾಯಿತು. ಪ್ರದೀಪ ಕೇಳಿದ ‘ಅಲ್ಲಾ, ಮೂರು ದಿವಸ ಕಾಡು-ಮೇಡು ಸುತ್ತಿದಾಗಲೇ ಭಯವಾಗಲಿಲ್ಲ. ಬಹುಪಾಲು ಮನುಷ್ಯರೇ ಆಕ್ರಮಿಸಿಕೊಂಡಿರುವ ನಗರಕ್ಕೆ ಬಂದ ತಕ್ಷಣವೇ
ಭಯವಾಗುತ್ತಿದೆಯಲ್ಲಾ. ಎಂತಹ ವಿಪರ್ಯಾಸ ಅಲ್ವಾ?’ ಎಂದು ಕೇಳಿದ. ಹೌದು, ನನಗೂ ಅದೇ ಆಶ್ಚರ್ಯ. ಕಾಡಲ್ಲಿ ಮೂಡದಿದ್ದ ಭಯ ನಗರಕ್ಕೆ ಕಾಲಿಟ್ಟ ತಕ್ಷಣ ಆವರಿಸಿಕೊಂಡಿದ್ದು ಯಾಕೆ? ಒಂದು ಕಡ್ಡಿ ಹಿಡಿದುಕೊಂಡು ಎಷ್ಡು ಕಾಡು-ಮೇಡು ಸುತ್ತಿಲ್ಲ? ಕಾರಿನ ಕಿಟಕಿಯೆಲ್ಲಾ ಮುಚ್ಚಿ, ಏಸಿಯ ತಣ್ಣನೆಯ ಗಾಳಿಯ ತಂಪಿದ್ದರೂ ನಡೆಯದ ಘಟನೆಗಳನ್ನು ಕಲ್ಪಿಸಿಕೊಂಡು ನಮ್ಮ ಮೈ ಕಂಪಿಸಿದ್ದೇಕೆ? ಕಟ್ಟಡಗಳ ಬೃಹತ್ತಾದ ನೆರಳಿನ ಭಯವೇ? ವಾಹನಗಳ ಕರ್ಕಶ ಸದ್ದಿನ ಅಂಜಿಕೆಯೇ? ಕೆರೆಗಳ ಮಧ್ಯೆದಲ್ಲೂ ವಿಷಪೂರಿತ ನೊರೆಗಳ ಜೊತೆ ಬೆಂಕಿ ಕಾಣಿಸಿಕೊಂಡ ವಿಸ್ಮಯವೇ? ನರಕ ಆಸ್ಪತ್ರೆಗಳಲ್ಲಿನ ಆಕ್ರಂದÀನದ ಕೂಗೆ? ವೇಗದ ಜೀವನದ ತಿರುವುವಿನಲ್ಲಿ ಅಪಘಾತಕ್ಕೀಡಾಗಬಹುದೆಂಬ ದಿಗಿಲೇ? ನಿಧಾನವಾಗಿ ಚಲಿಸಿದರೂ ಹಿತೈಷಿಯ ಪೋಸಿನಲ್ಲಿ ಬಂದು ಮನೆಯ ಬಾಗಿಲ ತಟ್ಟಿ ಪಿಸ್ತೂಲನ್ನು ತಮ್ಮ ಹಣೆಗಿಟ್ಟು ತಮ್ಮ ಪ್ರಾಣ ಪಕ್ಷಿಯನ್ನು ಹೊತ್ತೋಯ್ಯಬಹುದೆಂಬ ಆತಂಕವೇ? ಧೀನ-ದಲಿತರ ಉಸಿರುಗಟ್ಟಿಸಿ, ಅನ್ನದಾತರ ನೇಣು ಬಿಗಿದು, ಶೋಷಿತರೊಟ್ಟಿಗೆ ಶವ ಪೆಟ್ಟಿಗೆಗೆ ಮೊಳೆ ಹೊಡೆಯುತ್ತಿರುವ ದುಸ್ವಪ್ನವೇ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಲಿಗೆ ಹೋಗದೆ ನನ್ನ ಪಾಡಿಗೆ ನಾನಿದ್ದೆ. ಟಿಮ್ನ ಘಟನೆಯೊಂದಿಗೆ ಹೆಂಡತಿಯ ಹೆಣ ಹೊತ್ತ ಪ್ರಸಂಗವೂ ಜರುಗಿದ ಮೇಲೆ ಆ ಪ್ರಶ್ನೆಗಳೆಲ್ಲಾ ಮತ್ತೆ ಮರುಕಳಿಸಿದಂತಾಗಿ ಈ ಬರಹವನ್ನು ಬರೆಯಬೇಕಾಗಿ ಬಂತು. ಓದಗರಲ್ಲೂ ಇಂತಹ ಅನುಭವವಾಗಿದ್ದರೆ, ಒಗ್ಗೂಡಿ ಉತ್ತರ ಹುಡುಕಬಹುದು. ಏನಂತೀರ?
ರಾದ




